ನೀಲಕಂಠ ಶಿವಾಚಾರ್ಯ -
	ಸು. 1400. ವೀರಶೈವ ಧರ್ಮ, ತತ್ತ್ವಗಳನ್ನು ನಿರೂಪಿಸುವ ಕ್ರಿಯಾಸಾರವೆಂಬ ಸಂಸ್ಕøತ ಗ್ರಂಥದ ಕರ್ತೃ. ವೀರಶೈವ ಸಿದ್ಧಾಂತಗಳನ್ನು ನಿರೂಪಿಸುವ ಪ್ರಮಾಣ ಗ್ರಂಥಗಳಲ್ಲಿ ಒಂದಾಗಿದೆ. ಈತ ತನ್ನ ವಿಷಯವಾಗಿ ಹೆಚ್ಚು ಏನನ್ನೂ ಹೇಳಿಕೊಂಡಿಲ್ಲ. ಗ್ರಂಥದ ಪ್ರಾರಂಭದಲ್ಲಿ ತಂದೆ ಮತ್ತು ತಾಯಿಯರನ್ನು ಸ್ತುತಿಸಿದ್ದಾನೆ. ಇದರಿಂದ ಈತನ ತಾಯಿ ಚೆನ್ನಮ್ಮ; ತಂದೆ ಮಲ್ಲಯ್ಯ ದೇವ ಎಂದು ತಿಳಿದುಬರುತ್ತದೆ.

	ಕ್ರಿಯಾಸಾರ ಗ್ರಂಥದ ಮೂಲ ಪೂರ್ವದ ನೀಲಕಂಠ ಶಿವಾಚಾರ್ಯ ರಚಿಸಿದ್ದ ಬ್ರಹ್ಮಸೂತ್ರ ಭಾಷ್ಯ. ಅದು ಇಂದು ಉಪಲಬ್ದವಿಲ್ಲ. ಆ ನೀಲಕಂಠ ಭಾಷ್ಯಕ್ಕೆ ತಾನು ಕಾರಿಕ (ಶ್ನೋಕ) ರೂಪವಾಗಿ ವ್ಯಾಖ್ಯಾನಿಸಿರುವುದಾಗಿ ಈತ ಹೇಳಿಕೊಂಡಿದ್ದಾನೆ. ಪ್ರಾಯಃ ಮೊದಲ ನೀಲಕಂಠ ಆದಿಶಂಕರರೊಡನೆ ವಾಕ್ಯಾರ್ಥವನ್ನೆಸಗಿ ನಿರ್ಜೀತನಾದ ಹರದತ್ತಾಚಾರ್ಯರ ಗುರು ಇರಬೇಕೆಂದು ಊಹಿಸಲಾಗಿದೆ. ಆನಂದಗಿರಿಯ ಶಂಕರವಿಜಯ ಮತ್ತು ವಿದ್ಯಾರಣ್ಯರ ಶಂಕರ ದಿಗ್ವಿಜಯಗಳಲ್ಲಿ ಈತನ ಉಲ್ಲೇಖವಿದೆ.

	ಕ್ರಿಯಾಸಾರ ಗ್ರಂಥಕ್ಕೆ ಕೆಳದಿಯ ನಿರ್ವಾಣ ಮಂತ್ರಿ ರಾಜನ (1725) ಕ್ರಿಯಾಸಾರ ಸರ್ವಭೂಷಣ ಎಂಬ ವ್ಯಾಖ್ಯಾನವಿದೆ. ಈತ ಕೆಳದಿಯ ರಾಜ ಸೋಮಶೇಖರನ ಮಂತ್ರಿಯೂ, ಅಳಿಯನೂ ಆಗಿದ್ದನೆಂದು ತಿಳಿದುಬಂದಿದೆ. 

	ಕ್ರಿಯಾಸಾರದ ಪ್ರಾಮಾಣ್ಯವನ್ನು ನೇಪಾಳದ ರಾಜಪ್ರತಾಪಸಿಂಹಕೃತ ಶಾರದಾ ತಿಲಕ ಮತ್ತು ಪುರಶ್ಚರ್ಯಾರ್ಣವಗಳು ಒಪ್ಪಿರುವುದರಿಂದ ಇದು ಭಾರತದ ದಕ್ಷಿಣೋತ್ತರಭಾಗಗಳೆರಡರಲ್ಲಿಯೂ ಪ್ರಸಿದ್ಧವಾಗಿದ್ದಂತೆ ತಿಳಿದುಬರುತ್ತದೆ.

	ನೀಲಕಂಠ ಶಿವಾಚಾರ್ಯ ಕನ್ನಡದಲ್ಲಿಯೂ ಸಕಲಾಗಮಾರ್ಥವಿವರಣ ಎಂಬ ಗ್ರಂಥವೊಂದನ್ನು ಬರೆದಿದ್ದಾನೆಂಬುದು ಕ್ರಿಯಾಸಾರದ 19ನೆಯ ಉಪದೇಶಾದ್ಯಂತದ ಉಲ್ಲೇಖದಿಂದಲೂ ನಾಲ್ಕನೆಯ ಉಪದೇಶದಲ್ಲಿ `ಏಕೋತ್ತರ ಶತಸ್ಥಲಾನಾಂ ಬೇದಸ್ತು ಅಸ್ಮ್‍ತ್ ಕೃತೇ ಭಾಷಾಪ್ರಭಂದೇ ಅವಗಂತವ್ಯಃ ಎಂದಿರುವುದರಿಂದಲೂ ತಿಳಿದು ಬರುತ್ತದೆ. ಆದರೆ ಈ ಗ್ರಂಥ ಈವರೆಗೆ ಉಪಲಬ್ದವಾಗಿಲ್ಲ.

	ಕ್ರಿಯಾಸಾರದಲ್ಲಿ ಒಟ್ಟು 32 ಉಪದೇಶಗಳಿವೆ. ಇವುಗಳ ಮೊದಲು ನಾಲ್ಕು ಬ್ರಹ್ಮಸೂತ್ರಗಳ ನಾಲ್ಕು ಅಧ್ಯಾಯಗಳ ಸಾರಸಂಗ್ರಹ. ಉಳಿದ ಉಪದೇಶಗಳಲ್ಲಿ ಕ್ರಮವಾಗಿ ಸ್ನಾನವಿಧಿ, ಭಸ್ಮದ ಉತ್ಪತ್ತಿ, ಭಸ್ಮಧಾರಣ, ಭಸ್ಮಪ್ರಶಂಸೆ, ರುದ್ರಾಕ್ಷೋತ್ಪತ್ತಿ, ರುದ್ರಾಕ್ಷಧಾರಣ. ರುದ್ರಾಕ್ಷಪ್ರಶಂಸೆ, ಪಂಚಾಕ್ಷರಜಪ, ತಿಥಿ, ಪಂಚಾಕ್ಷರ ಮಹಿಮೆ, ಶಿವಪೂಜಾವಿಧಿ, ಪುಷ್ಪಪತ್ರಾದಿಲಕ್ಷಣ ಗುರುಪೂಜಾವಿಧಿ, ಭಕ್ತಪ್ರಶಂಸದಾನ, ಲಿಂಗಾಂಗಸಾಮರಸ್ಯ, ಲಿಂಗಧಾರಣವೈಭವ, ಮಹಾಲಿಂಗ ಲಕ್ಷಣ, ಶಕ್ತಿವೈಶಿಷ್ಟ್ಯ, ಗೋಲಕಾದಿಸ್ಖಲನ, ಪಟ್‍ಸ್ಥಲ, ಶೈವಾದೀಕ್ಷಾವಿಧಿ, ಸುಗುಣಮೂರ್ತಿಧ್ಯಾನ, ನಿಷ್ಕಲಮೂರ್ತಿಧ್ಯಾನ, ಪ್ರಸಾದಗ್ರಹಣವಿಧಿ, ಆಗಮಪ್ರಾಮಾಣ್ಯ, ಶಿವಪುಣ್ಯ ಮಹಾತ್ಮ್ಯ, ಶಿವದ್ರೋಹೇ ಸಮಾಗತೇ ನಿಷ್ಕøತಿ, ಶಿವಾರ್ಚನಫಲ ಎಂಬ ಮೂವತ್ತೆರಡು ವಿಷಯಗಳು ನಿರೂಪಿಸಲ್ಪಟ್ಟಿವೆ.											(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ